ಐತಿಹಾಸಿಕ ಸಿರಿ ಗಿಂಡೆ ಬಾವಿ ನವೀಕರಣ , ನಂದಳಿಕೆ ಕಾನಬೆಟ್ಟು ಕುಟುಂಬಿಕರಿಂದ ಮತ್ತೊಂದು ಇತಿಹಾಸ ನಿರ್ಮಾಣ ಹರಿಪ್ರಸಾದ್ ನಂದಳಿಕೆ ಬೆಳ್ಮಣ್ :ತುಳುನಾಡಿನ ಕಾರಣಿಕದ ಮಹಿಳೆ ಸತ್ಯನಾಪುರದ ಸಿರಿ ಓಡಾಡಿದ ಪುಣ್ಯ ಕ್ಷೇತ್ರ ನಂದಳಿಕೆಯಲ್ಲಿನ ಪ್ರತಿಷ್ಠಿತ ಕಾನಬೆಟ್ಟು ಬಂಟ ಮನೆತನದವರು ಸತ್ಯದ ಸಿರಿಯ ಪುರಾಣದಲ್ಲಿ ಒರ್ವಳಾದ ಗಿಂಡೆಯು ಮಾಯಾ ಲೋಕವನ್ನು ಸೇರಿದ ಸಿರಿಗಿಂಡೆ ಬಾವಿಯನ್ನು ನವೀಕರಣಗೊಳಿಸಿ ಇನ್ನೊಂದು ಇತಿಹಾಸ ಸೃಷ್ಠಿಸಿದ್ದಾರೆ. ಈ ಮೂಲಕ ಸತ್ಯದ ಸಿರಿ ಗಿಂಡೆಯ ಕಾರಣಿಕದ ಕಥೆಯನ್ನು ಲೋಕಕ್ಕೆ ಸಾರುವ ಕಾಯಕವನ್ನು ನಂದಳಿಕೆ ಕಾನಬೆಟ್ಟು ಕುಟುಂಬಿಕರು ಒಂದಾಗಿ ನಡೆಸಿ ಸುದ್ದಿಯಾಗಿದ್ದಾರೆ.

ಕಾರ್ಕಳ ತಾಲೂಕಿನ ನಂದಳಿಕೆ ಕಾನಬೆಟ್ಟುವಿನಲ್ಲಿ ಹಲವಾರು ವರ್ಷಗಳಿಂದ ಕಾರಣಿಕ ಶಕ್ತಿಯಾದ ಗಿಂಡೆ ಮಾಯವಾದ ಬಾವಿ ಪಾಳು ಬಿದ್ದಿದ್ದು ಈ ಬಾವಿಯನ್ನು ನವೀಕರಣ ಮಾಡುವ ಕಾರ್ಯಕ್ಕೆ ಕಾನಬೆಟ್ಟು ಕುಟುಂಬಿಕರು ನಡೆಸಿದ್ದಾರೆ. ಹಿನ್ನೆಲೆ : ನಂದಳಿಕೆ ಸಮೀಪದ ಬೆಳ್ಮಣ್‌ನ ಪ್ರತಿಷ್ಠಿತ ಬ್ರಾಹ್ಮಣರ ಮನೆತನವಾದ ಮಡ್ಕು ಮನೆತನದ ಮಡ್ಕು ರಾಯರ ಮಡದಿ (ಹೆಂಡತಿ) ಚಂದ್ರಾವತಿಯವರಿಗೆ ಪ್ರಸವ ವೇದನೆ ಅತಿಯಾದರೂ ಹೆರಿಗೆಯಾಗದ ಕಾರಣ ಅವರಿಗೆ ತಂದೊಳಿಗೆ ಮರದ ಎಲೆಯ ಗಟ್ಟಿ (ಒಂದು ಬಗೆಯ ತುಳುನಾಡಿನ ತಿಂಡಿ)ಯನ್ನು ತಿನ್ನುವ ಆಸೆಯಿದೆ ಎಂದು ತಿಳಿದಿದ್ದ ರಾಯರು ಕೆಲಸದವರನ್ನು ಎಲೆಯನ್ನು ತರುವಂತೆ ತಿಳಿಸಿದರು. ಕೆಲಸದವರು ಇಡೀ ಬೆಳ್ಮಣ್ ಪರಿಸರದಲ್ಲಿ ಸುತ್ತಾಡಿದರು ಎಲೆ ಸಿಗದ ಕಾರಣ ಎಲೆಯನ್ನು ಹುಡುಕುತ್ತ ನಂದಳಿಕೆ ಕಕ್ಕೆ ಪದವಿನ ಕಾಡಿಗೆ ಭೇಟಿ ನೀಡಿದಾಗ ಅಲ್ಲೊಂದು ಮರ ಸಿಗುತ್ತದೆ. ಆದರೆ ಆ ಮರದ ಕೆಳಗೆ ಎರಡು ಹುಲಿಗಳು ಇದ್ದ ಕಾರಣ ಎಲೆಯನ್ನು ತೆಗೆಯಲು ಸಾಧ್ಯವಾಗಿಲ್ಲ.ಬಳಿಕ ಸುದ್ದಿ ತಿಳಿದು ಆ ಸ್ಥಳಕ್ಕೆ ಮಡ್ಕು ರಾಯರು ಆಗಮಿಸಿ ಹುಲಿಗಳಲ್ಲಿ ಭಕ್ತಿಯಿಂದ ವಿನಂತಿಸಿಕೊಂಡಾಗ ಹುಟ್ಟುವ ಮಗುವನ್ನು ನಮಗೆ ನೀಡಿದರೆ ಎಲೆ ತೆಗೆಯಲು ಬಿಡುತ್ತೇವೆ ಎಂದು ಅಶರೀರವಾಣಿಯು ಕೇಳುತ್ತದೆ. ಹೆಂಡತಿಯ ಮೇಲಿನ ಪ್ರೀತಿಯಿಂದ ಮಡ್ಕು ರಾಯರು ಹುಲಿಗಳ ಮಾಯದ ಮಾತಿಗೆ ಒಪ್ಪುತ್ತಾರೆ. ಬಳಿಕ ಎಲೆಯನ್ನು ತಂದು ಮಡದಿಗೆ ತಂದೊಳಿಗೆಯ ಎಲೆಯ (ಗಟ್ಟಿ )ಆಹಾರವನ್ನು ಮಾಡಿಕೊಡುತ್ತಾರೆ.ಆಹಾರವನ್ನು ಸೇವಿಸಿದ ಚಂದ್ರಾವತಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಮಗುವಾಯಿತೆಂಬ ಸಂತಸದಿಂದ ಹುಲಿಗಳಿಗೆ ನೀಡಿದ ಮಾತನ್ನು ರಾಯರು ಮರೆತು ಬಿಡುತ್ತಾರಾದರೂ ಹುಲಿಗಳು ಮಾತ್ರ ಮರೆಯದೆ ಹೇಳಿದ ರೀತಿಯಲ್ಲೇ ಮಗುವನ್ನು ಮಡ್ಕು ಮನೆತನದಿಂದ ಹಿಡಿದುಕೊಂಡು ಕಾಡ ದಾರಿ ಹಿಡಿಯುತ್ತದೆ. ಇದೇ ಸಂದರ್ಭ ಕಾನ ಬೆಟ್ಟುವಿನ ಕೆಲಸದವರು ಖೆಡ್ಡಸದ ಬೇಟೆಗಾಗಿ ಕಾಡಿಗೆ ಬಂದಾದ ಹುಲಿಗಳ ಮಧ್ಯೆ ಮಗು ಇರುವುದನ್ನು ಗಮನಿಸಿ ಕಾನಬೆಟ್ಟುವಿನ ಅಜ್ಜ ಚಂದು ಪೆರ್ಗಡೆಗೆ ಸುದ್ದಿ ತಿಳಿಸುತ್ತಾರೆ. ಅಜ್ಜ ಚಂದು ಪೆರ್ಗಡೆ ಕಾಣಿಕೆಯನ್ನು ಇಟ್ಟು ಹುಲಿಗಳಲ್ಲಿ ಭಕ್ತಿಯಿಂದ ಪ್ರಾರ್ಥಿಸಿದಾಗ ಹುಲಿಗಳು ಮಗುವನ್ನು ಬಿಟ್ಟು ಕಾಡದಾರಿ ಹಿಡಿದು ಹೋಗುತ್ತದೆ. ಪವಾಡ ಸದೃಶವಾಗಿ ಬದುಕಿ ಉಳಿದ ಬಳಿಕ ಆ ಹೆಣ್ಣು ಮಗುವನ್ನು ಅಜ್ಜ ಚಂದು ಪೆರ್ಗಡೆ ತಂದು ತನ್ನ ಕಾನಬೆಟ್ಟುವಿನ ಮನೆಯಲ್ಲಿ ಸಾಕುತ್ತಾರೆ. ಮಗು ಪ್ರೌಢಾ ವ್ಯಸ್ಥೆಗೆ ಬರುವಾಗ ನೀರುಸ್ನಾನ ಮಾಡುವ ಪದ್ದತಿಗೆ ಇಡೀ ಊರೇ ಸಜ್ಜಾಗುತ್ತದೆ. ಇದೇ ಸಂದರ್ಭ ಕಾನಬೆಟ್ಟುವಿನಲ್ಲೆ ಬೆಳೆದಿರುವ ಇನ್ನೋರ್ವ ಕಾರಣಿಕದ ಕನ್ಯೆ ಸೊನ್ನೆಯೂ ಗಿಂಡೆಯ ಜತೆಯಾಗಿಯೇ ಇರುತ್ತಿದ್ದು ನೀರು ಸ್ನಾನ ಪದ್ಧತಿಗೆ ಸೊನ್ನೆ ಮಾತ್ರ ಈ ಕಾರ್ಯಕ್ಕೆ ಬರಬಾರದು ಎಂದು ಊರ ಜನ ಮತ್ಸರದ ಮಾತುಗಳನ್ನು ಆಡಿ ಅಜ್ಜರಲ್ಲಿ ಶರತ್ತು ಹಾಕುತ್ತಾರೆ. ಶರತ್ತಿಗೆ ಒಪ್ಪಿದ ಅಜ್ಜ ಸೊನ್ನೆಗೆ ಆಹ್ವಾನವನ್ನು ನೀಡುವುದಿಲ್ಲ.ಅಜ್ಜ ಆಹ್ವಾನ ನೀಡದಿದ್ದರೂ ಸೊನ್ನೆ ಕಾರ್ಯಕ್ರಮಕ್ಕೆ ಬರುತ್ತಾಳೆ .ಇದನ್ನು ಕಂಡ ಊರ ಜನ ಎದ್ದು ಹೋಗಿ ಮರದ ಅಡಿಯಲ್ಲಿ ಸೇರುತ್ತಾರೆ. ಈ ಎಲ್ಲಾ ಸನ್ನಿವೇಶಗಳು ಅಜ್ಜ , ಸೊನ್ನೆ ಹಾಗು ಗಿಂಡೆಯ ನಡುವೆ ಬೇಸರ ತರಿಸುತ್ತದೆ. ಸೊನ್ನೆ ಮತ್ತು ಗಿಂಡೆ ಮುಖ ಮುಖ ನೋಡಿಕೊಳ್ಳುತ್ತ ಒಬ್ಬರ ಮನಸ್ಸು ಒಬ್ಬರು ಅರಿತುಕೊಳ್ಳುತ್ತಾರೆ. ತನಗಾದ ಅವಮಾನವನ್ನು ನೋಡಿ ಸೊನ್ನೆಯು ಊರ ಜನಕ್ಕೆ ಬುದ್ದಿ ಕಲಿಸಬೇಕಾಗಿ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ಗಿಂಡೆಯನ್ನು ನೋಡುತ್ತ ಗಿಂಡೆಯ ಇಚ್ಚೆಯಂತೆ ಗೆಜ್ಜೆಕತ್ತಿಯನ್ನು ತೆಗೆದು ಕೆಳಗಿನ ಬಾವಿಯಲ್ಲಿ ಮಾಯ ಮಾಡುತ್ತಾಳೆ. ಆದರಿಂದ ಸೊನ್ನೆಯು ಗಿಂಡೆಯನ್ನು ಮಾಯ ಮಾಡಿದ ಬಾವಿ ಎಂದೇ ನಂದಳಿಕೆಯಲ್ಲಿ ಇಂದಿಗೂ ಪ್ರಸಿದ್ದಿಯನ್ನು ಪಡೆದಿದೆ. ಬಾವಿ ನವೀಕರಣಗೊಂಡಿತು : ಸತ್ಯದ ಸಿರಿಗಳ ಕಥಾನಕ ನಡೆದು ನೂರಾರು ವರ್ಷಗಳು ಕಳೆದಿದ್ದು ಗಿಂಡೆಯನ್ನು ಮಾಯ ಮಾಡಿದ ಬಾವಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು ಇದೀಗ ಕಾನಬೆಟ್ಟು ಕುಟುಂಬಿಕರು ನವೀಕರಣದ ನಡೆಸಿದ್ದಾರೆ. ಸುಮಾರು ೮ ಲಕ್ಷ ರೂ ಅಂದಾಜು ವೆಚ್ಚದಲ್ಲಿ ಈ ಐತಿಹಾಸಿಕ ಹಿನ್ನೆಯುಳ್ಳ ಬಾವಿ ನವೀಕರಣಗೊಂಡಿದ್ದು ಸೋಮವಾರ ಧಾರ್ಮಿಕ ವಿಧಿಗಳೊಂದಿಗೆ ಲೋಕಾರ್ಪಣೆ ನಡೆಯಿತು.

ಸತ್ಯನಾಪುರದ ಸಿರಿ ತುಳುನಾಡಿನಾದ್ಯಂತ ಓಡಾಡಿದ ಜಾಗದಲ್ಲಿ ಸಿರಿ ಪಲ್ಲ, ಸಿರಿ ಬಾವಿಗಳು ನಮಗೆ ಕಾಣಸಿಗುತ್ತಿದ್ದು ಅಂತಹ ಬಾವಿಯ ನೀರು ಬೇಸಿಗೆಯಲ್ಲೂ ಬತ್ತದೆ ಇರುವುದು ಸಿರಿಯ ಕಾರಣಿಕವೆಂದು ಕಟು ಸತ್ಯ. ಅಂತಹ ಬಾವಿಗಳ ಪೈಕಿ ನಂದಳಿಕೆ ಕಾನಬೆಟ್ಟುವಿನ ಈ ಗಿಂಡೆ ಬಾವಿಯೂ ಒಂದಾಗಿದ್ದು ಕಾನಬೆಟ್ಟು ಕುಟುಂಬಿಕರು ಈ ಐತಿಹಾಸಿಕ ಸಿರಿ ಕಥಾನಕಕ್ಕೆ ಮುನ್ನುಡಿ ಬರೆದಿದ್ದಾರೆ.